ರಾಘವೇಂದ್ರರಾವ್, ಎಂ
ಹಿಂದೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ದೇವಾಲಯಗಳಲ್ಲಿ, ಚಾವಡಿಗಳಲ್ಲಿ ಪ್ರತಿ ಸಂಜೆ ಕುಮಾರವ್ಯಾಸ ತೊರವೆಯ ನರಹರಿ, ಲಕ್ಷ್ಮೀಶ, ಹರಿಹರ ರಾಘವಾಂಕರು ವಿಜೃಂಭಿಸುತ್ತಿದ್ದರು. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಗಮಕ ಕಲೆಗೆ ಗ್ರಹಣ ಬಡಿಯಿತು. ಅರಮನೆ ಗುರುಮನೆಗಳಲ್ಲಿ ಹಾಗೂ ಶ್ರೀಮಂತರ ಸ್ವತ್ತಾಗಿದ್ದ ಈ ಕಲೆಯನ್ನು ಜನಸಾಮಾನ್ಯರ ಬಳಿಗೆ ಮತ್ತೆ ತಂದು ಕೀರ್ತಿಶಾಲಿಗಳಲ್ಲಿ ಎಂ. ರಾಘವೇಂದ್ರರಾಯರು ಪ್ರಮುಖರು. ಹುಟ್ಟಿದುದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಆಗಸ್ಟ್ 7, 1914ರಲ್ಲಿ. ತಂದೆ ಮೈಸೂರು ನೀಲಕಂಠ ಕೇಶವರಾಯರು, ಸಂಸ್ಕøತ ಭಾಷಾ ಪಂಡಿತರು, ತಾಯಿ ವೆಂಕಟಲಕ್ಷ್ಮಮ್ಮ, ಚಿಕ್ಕಜ್ಜಿ ಹಾಡಿನ ತುಳಸಮ್ಮ. ಮನೆಯಲ್ಲೇ ಸಂಗೀತ ಸಾಹಿತ್ಯದ ಅಂಕುರಾರ್ಪಣ. ಮೈಸೂರು ಶಾರದಾ ವಿಲಾಸ ಶಾಲೆಯ ವಿದ್ಯಾರ್ಥಿ. ರಾಘವೇಂದ್ರನ  ಸಂಗೀತ ಸಾಹಿತ್ಯಾಸಕ್ತಿಯ ವಿಕಾಸಕ್ಕೆ ನೆರವಾದರು. ಪದ್ಯವಾಚನ ಕಲೆಯಲ್ಲಿ ನಿಷ್ಣಾತರಾದ ಗೌರಿ ದೇವುಡು ಮತ್ತು ಮೈಸೂರು ಆಸ್ಥಾನ ಸಂಗೀತ ವಿದ್ವಾಂಸರಾದ ಚಿಕ್ಕ ರಾಮರಾಯರು. ಆಗಿನ ಮೈಸೂರಿನಲ್ಲಿದ್ದ ಸಾಂಸ್ಕøತಿಕ ವಾತಾವರಣವೂ ರಾಘವೇಂದ್ರನ ವ್ಯಕ್ತಿ ವಿಕಾಸಕ್ಕೆ ಪೂರಕವಾಗಿತ್ತು. ಮನೆ ಮನೆಗಳ ಮುಂದೆ ಸುಶ್ರಾವ್ಯವಾಗಿ ಹಾಡುತ್ತ ಬರುತ್ತಿದ್ದ ದಾಸರು. ಗುರುವಾರ, ಶನಿವಾರಗಳಲ್ಲಿ ಮೈಸೂರಿನ ಸಂಗೀತಜ್ಞರು, ಸಾಹಿತಿಗಳು ಸೇರಿ ಅಲ್ಲಲ್ಲಿ ನಡೆಸುತ್ತಿದ್ದ  ಭಜನೆ, ಸಂಗೀತ, ಹರಿಕತೆ, ಕಾವ್ಯ ಗೋಷ್ಠಿಗಳು, ಚರ್ಚೆಗಳು. ಸಂಸ್ಕಾರ ಬಲದಿಂದ ಕೇಳ್ಮೆಯಲ್ಲಿಯೇ ಸಾಕಷ್ಟು ಕಲಿತ. ತಂದೆಯ ಜೊತೆಯಲ್ಲಿ ವಿದ್ವತ್ ಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದ ಬಾಲಕ, ಹಿರಿಯರ ಸೂಚನೆ ಮೇರೆಗೆ ಆಗಾಗ್ಗೆ ಪದ್ಯ ವಾಚನವನ್ನು ಮಾಡುತ್ತಿದ್ದದನ್ನು ಜವಳಿ ಅಂಗಡಿಯ ತಮ್ಮಯ್ಯ ಗಮನಿಸಿದರು. ಆತನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡಿದ್ದು ರಾಘವೇಂದ್ರನ ಪುಣ್ಯ ವಿಶೇಷ. ಗುರು ತಮ್ಮಯ್ಯನವರ ಶಿಕ್ಷಣ ವಿಧಾನ ವಿಶಿಷ್ಟವಾದದ್ದು. ಒಂದೇ ಪದ್ಯ, ಒಂದೇ ರಾಗದ ಬೋಧನೆ, ತಿಂಗಳುಗಟ್ಟಲೆ ನಡೆಯುತ್ತಿತ್ತು. ರಾಗದ ಪದ್ಯದ ವೈವಿಧ್ಯತೆಯನ್ನು ಸಂಪೂರ್ಣವಾಗಿ ಮನವರಿಕೆಯಾದ ಮೇಲೆ ಮುಂದಿನ ಹೆಜ್ಜೆ. ಎಂಟು ವರ್ಷಗಳ ಅವಧಿಯಲ್ಲಿ ಕಲಿತುದುದು ಇಪ್ಪತ್ತೈದು ರಾಗಗಳು. ಭದ್ರ ಬುನಾದಿ, ವಿಕಾಸದ ಹಾದಿ. ಈ ಕಲಿಕೆಯ ಜೊತೆಗೆ ಪ್ರಾತ್ಯಕ್ಷಿತೆ: ನರಹರಿ ಜೊಯಿಸರ ಮನೆಯಲ್ಲಿ ಪ್ರತಿದಿನ 3ಗಂಟೆಗೆ ಕಾವ್ಯವಾಚನ, ಪ್ರತಿ ಶನಿವಾರ ರಾತ್ರಿ 7ರಿಂದ 9ರವರೆಗೆ ಸಂಗೀತಮಯ ಭಜನೆ. ಇಲ್ಲಿ ಆಗಾಗ ಕಿಕ್ಕೇರಿ ನಾರಾಯಣ ಶಾಸ್ತ್ರಿಗಳು ಉಡುಪರು, ಗಮಕಿ ರಾಮಕೃಷ್ಣ ಶಾಸ್ತ್ರಿಗಳು, ತಮ್ಮಯ್ಯನವರು ಮತ್ತು ಆಗಿನ ಕಾಲದಲ್ಲಿ ಮೈಸೂರಿನಲ್ಲಿದ್ದ ಸಹೃದಯ ಪಂಡಿತರೆಲ್ಲಾ ನಡೆಸುತ್ತಿದ್ದ ಪ್ರವಚನಗಳು, ಚರ್ಚೆಗಳು ರಾಘವೇಂದ್ರ ಎತ್ತರಕ್ಕೆ ಬೆಳೆಯಲು ನೆರವಾದವು.

ಸೋಸಲೆ ರಾಮದಾಸರು, ಬೇಲೂರು ಕೇಶವ ದಾಸರು, ವೆಂಕಟಾಚಲ ದಾಸರು ಇವರ ಹರಿ ಶಿವ ಕತೆಗಳನ್ನು ಶ್ರದ್ಧೆಯಿಂದ ಶ್ರವಣ ಮಾಡಿದುದು ಮಾತ್ರವಲ್ಲ. ಅವರ ಮುಂದೆ ಹಾಡಿ, ಅವರ ಪ್ರಶಂಸೆಯನ್ನು ಪಡೆದ, ಆತ್ಮವಿಶ್ವಾಸ ಬೆಳಸಿಕೊಂಡ, ರಾಘವೇಂದ್ರ.

ತಂದೆಗೆ ನಿವೃತ್ತಿಯಾಯಿತು. ತಂದೆಯೊಡನೆ ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕಕ್ಕೆ ಬಂದಾಗ, ರಾಘವೇಂದ್ರರಾಯರಿಗೆ ತಮ್ಮ ಮುಂದಿನ ದಾರಿ ಯಾವುದೆಂದು ನಿಶ್ಚಯ ಮಾಡಿಕೊಂಡರು. ಗಮಕ ಕಲೆ ಸಾರೋದ್ಧಾರಕ್ಕೆ ಕಂಕಣ ತೊಟ್ಟರು.

	ಸಂಗೀತರತ್ನ ಟಿ. ಚೌಡಯ್ಯನವರಿಗೆ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ. ರಾಘವೇಂದ್ರರಾಯರು, ಈ ಸಂದರ್ಭಕ್ಕಾಗಿ ಸ್ವಾಗತ ಪದ್ಯಮಾಲಿಕೆ ರಚಿಸಿ, ತುಂಬಿದ ಸಭೆಯಲ್ಲಿ ರಾಗಮಾಲಿಕೆಯನ್ನು ಹಾಡಿದರು. ಶೋತೃಗಳು ಮಂತ್ರ ಮುಗ್ಧರಾದರು. ಕೆಲವು ಶೋತೃಗಳಿಗೆ ಕಾವ್ಯವಾಚನ ಕಲಿಕೆಯಲ್ಲಿ ಆಸಕ್ತರಾದರು. ರಾಯರು ತರಗತಿಗಳನ್ನು ಆರಂಭಿಸಿದರು. ತರಗತಿಗಳಿಗೆ ಬರಲಾಗದ ಉನ್ನತಾಧಿಕಾರಿಗಳ ಮನೆಗೇ ಹೋಗಿ ಕಲಿಸುತ್ತಿದ್ದರು. ಗಮಕ ಕಲೆ ಪುನರುದ್ಧಾರಕ್ಕೆ ಗಮಕಗಳ ಸಂಖ್ಯೆ ಹೆಚ್ಚಬೇಕೆಂಬುದು ಅವರ ನಿಲುವು.

	ಡಿ.ವಿ. ಗುಂಡಪ್ಪನವರು ಜಿ, ನಾರಾಯಣ ಇವರುಗಳ ಆಸಕ್ತಿಯ ಫಲವಾಗಿ, ಕನ್ನಡ ಸಾಹಿತ್ಯ ಪರಿಷತ್ತು ಗಮಕ ಕಲೆ ಶಿಕ್ಷಣಕ್ಕೆ, ಪ್ರಚಾರಕ್ಕೆ ಆದ್ಯತೆ ನೀಡಿತ್ತು. ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು, ಸಂಸ್ಕøತಿ ಪ್ರಸಾರ ಯೋಜನೆಯಡಿಯಲ್ಲಿ, ಗ್ರಾಮ, ಗ್ರಾಮಗಳಲ್ಲಿ ಕಾವ್ಯವಾಚನ. ಕಾರ್ಯಕ್ರಮ  ಜಾರಿಗೊಳಿಸುವ ಹೊಣೆಗಾರಿಕೆ ಸೇರಿಕೊಂಡಿತು. ರಾಜ್ಯಾದ್ಯಂತ ಗಮಕ ಪ್ರಚಾರ, ಗಮಕ ಶಿಕ್ಷಣ ಗಮಕಗಳಿಕೆ ತರಬೇತಿ ಈ ಗುರುತರ ಹೊಣೆಗಾರಿಕೆ ರಾಘವೇಂದ್ರರಾಯರ ಮೇಲೆ ಬಿದ್ದಿತು. ರಾಯರಿಗೆ ಇದು ಅತ್ಯಂತ ಪ್ರಿಯವಾದ ಕಾರ್ಯ. ಉತ್ಸಾಹದಿಂದಲೇ ಮಾಡಿದರು.  ಕಾವ್ಯವಾಚನ, ಶಿಕ್ಷಣದ ಜೊತೆಗೆ, ಅದಕ್ಕೆ ಅಗತ್ಯವಾದ ಗ್ರಂಥಗಳ ರಚನೆ. ಮಾರ್ಗಸೂಚಿಗಳನ್ನು ಸಿದ್ಧಪಡಿಸಿದರು. ಊರಿಂದೂರಿಗೆ ಪ್ರಯಾಣ ಮಾಡುವಾಗ ಕಾಲಹರಣ ಮಾಡದೆ, ಅದನ್ನು ಕೃತಿರಚನೆಗೆ ಸದುಪಯೋಗಪಡಿಸಿಕೊಂಡರು.

	ಪಠ್ಯಕ್ಕೆ ಅಗತ್ಯವಾದ ಗಮಕಕಲೆಯ ಸ್ವರೂಪ ಲಕ್ಷಣಗಳ ಬಗೆಗೆ ವಿವರ ನೀಡುವ 'ಗಮಕಿ' ಎಂಬ ಪದ್ಯಶತಕ 'ಕಾವ್ಯ ಗಾಯನ ಕಲಾ ಸಂಗ್ರಹ ಗಮಕ ಪ್ರಚಾರ ಬೋಧವೀ 'ಗಮಕ ಪ್ರವೇಶದಾಯಿನಿ ಎಂಬ ಪಠ್ಯಪುಸ್ತಕಗಳನ್ನು ಮತ್ತು 'ಗಮಕ ಗೀತೆಗಳು, ಸತ್ಯದೇವ ಚರಿತೆ, ವಾಸುದೇವ ವಿಜಯ, ವೆಂಕಟೇಶ ವಿಜಯ, 'ರಾಘವೇಂದ್ರ ಗುರು ಕೀರ್ತನ ಮಾಲಿಕಾ 'ಆನಂದ ಗೀತೆ ಮುಂತಾದ ಗೇಯ ಕೃತಿಗಳನ್ನು ರಚಿಸಿದ್ದಾರೆ.

	ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ ಧಾಟಿಯಲ್ಲಿ ರಾಯರು 'ರಾಘಣ್ಣನ ಕಲಿ ಪದಗಳು ಎಂಬ ಕೃತಿ ರಚಿಸಿ ಪ್ರಕಟಸಿದ್ದಾರೆ. ಪರಿಷತ್ತಿನ  ಮಾಜಿ ಅಧ್ಯಕ್ಷರು, ಮಾಜಿ ಪೌರರಾದ  ಜಿ. ನಾರಯಣರ ಒತ್ತಾಸೆಯಿಂದ ಗಮಕ ವಿಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೇರ್ಪಡಿಸಿ, ಕರ್ನಾಟಕ ಗಮಕ ಕಲಾ ಪರಿಷತ್ತು ಎಂಬ ಸಂಸ್ಥೆಯ ಆರಂಭಕ್ಕೆ ರಾಯರು ಶ್ರಮಿಸಿದರು. 1987ರ ಗಾಂಧಿಜಯಂತಿಯಂದು ಕರ್ನಾಟಕ ಗಮಕ ಕಲಾ ಪರಿಷತ್ತು ಅಸ್ತಿತ್ವಕ್ಕೆ ಬಂತು.

	ರಾಘವೇಂದ್ರ ರಾಯರ ಆಸಕ್ತಿಯಿಂದ ಗಮಕ ಪ್ರಚಾರ ಗೋಷ್ಠಿ ಎಂಬ ಸಂಸ್ಥೆಯ ಜನ್ಮ ತಾಳಿತು. ರಾಯರು, ತಮ್ಮ ಮನೆಯಲ್ಲೇ ಆರಂಭಿಸಿದ ಕಾವ್ಯ ಗಾಯನ ಕಲಾಮಂದಿರ ನೂರಾರು ಗಮಕಗಳನ್ನು ರೂಪಿಸಿದೆ. ರಾಯರ ಕುಟುಂಬ ಗಮಕಗಳ ಕುಟುಂಬ. ಗಮಕ ಕಲೆ ಪುನಶ್ಚೇತನ ನೀಡಿ, ಅದಕ್ಕೆ  ಘನತೆಯನ್ನು ಸ್ಥಿರತೆಯನ್ನು ತರಲು ತಮ್ಮ ಜೀವನವನ್ನೇ ಮುಡಿಪಾಗಿಸಿದ ರಾಘವೇಂದ್ರ ರಾಯರು ತಮ್ಮ 85ನೇ ವಯಸ್ಸಿನಲ್ಲಿ 1999-ನವೆಂಬರ್ 30ರಂದು ಸ್ವರ್ಗಸ್ಥರಾದರು.

	ಗಮಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ ಅವರಿಗೆ ನೀಡಿದ ಗೌರವ ಪ್ರಶಸ್ತಿಗಳಲ್ಲಿ ಕೆಲವು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1974) ಗಮಕ ಕಲಾ ಪರಿಷತ್ತಿನ ಮೂರನೆ ಸಮ್ಮೇಳನದ ಅಧ್ಯಕ್ಷತೆ. ಗಮಕ ರತ್ನಾಕರ ಬಿರುದು (1992) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994) ಮತ್ತು ರಾಜ್ಯಸರಕಾರದ ಕನಕ ಪುರಂದರ ಪ್ರಶಸ್ತಿ (1996).		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ